ಬೆಳಗಾವಿ: ಚಿಕ್ಕಮಕ್ಕಳು ಜಗಳಾಡಿದ್ದಾರೆಂಬ ವಿಷಯವನ್ನೇ ಸಹೋದರ ಸಂಬಂಧಿಗಳು ದೊಡ್ಡದು ಮಾಡಿಕೊಂಡು ಮಾರಣಾಂತಿಕವಾಗಿ ಬಡಿದಾಡಿಕೊಂಡಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೊಮ್ಮಕ್ಕಳ ಮೇಲಿನ ಹಲ್ಲೆ ಪ್ರಶ್ನಿಸಿದಕ್ಕೆ ಅಜ್ಜಿ, ಮಗ ಹಾಗೂ ಮಗಳ ಮೇಲೆಯೂ ಮಾರಣಾಂತಿಕವಾಗಿ ಹಲ್ಲೆ ನಡೆದಿದೆ ಎನ್ನಲಾಗಿದೆ.
ಉಮರಾಣಿ ಗ್ರಾಮದ ಭೀಮಾ ಜಿಡ್ಡಿಮನಿ( 20), ಶೋಭಾ ಶಂಕರ್ ಜಿಡ್ಡಿಮನಿ( 40), ವಿಠ್ಠಲ ಶಂಕರ ಜಿಡ್ಡಿಮನಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ನಾಲ್ವರನ್ನು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅನಿತಾ ರಾಯಪ್ಪ ಪೂಜೇರಿ ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಸಿದ್ದಪ್ಪ ಪೂಜೇರಿ, ಗಣೇಶ ಪೂಜೆರಿ, ಬಾಳೇಶ ಪೂಜೇರಿ, ಮಹಾದೇವಿ ಎಂಬುವವರು ಜಿಡ್ಡಿಮನಿ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ತಮ್ಮನ ಹೆಂಡತಿ ತಲೆ, ಬೆನ್ನು, ಕೈ ಹಾಗೂ ಮಗನ ಕೈ ಮೂಳೆ ಮುರಿಯುವಂತೆ ಹಲ್ಲೆ ಮಾಡಿದ್ದಾರೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.