ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಬಸ್ (BMTC Bus) ಗೆ ಮತ್ತೊಂದು ಬಲಿಯಾಗಿದೆ. ಬಸ್ ಹರಿದ ಪರಿಣಾಮ ವಿಶೇಷ ಚೇತನ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ (Death) ಘಟನೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಸ್ ನಿಲ್ದಾಣದಲ್ಲಿ ನಡೆದು ಹೋಗುತ್ತಿದ್ದ ಯುವಕನ ಮೇಲೆ ಬಸ್ ಹರಿದಿದೆ. ಘಟನೆಗೆ ಸಂಬಂಧಿಸಿದಂತೆ ಬಿಎಂಟಿಸಿ ಚಾಲಕ ಗೋಪಾಲ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಗೆ ಯುವಕ ಬಲಿಯಾಗಿದ್ದಾನೆ. ಅತಿ ವೇಗವೇ ಘಟನೆಗೆ ಕಾರಣ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮೃತ ಯುವಕನ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ವಿಶೇಷ ಚೇತನ ವ್ಯಕ್ತಿ ನಡೆದುಕೊಂಡು ಬರುತ್ತಿದ್ದ ವೇಳೆ ಬಸ್ ಚಾಲಕ ಅತೀ ವೇಗದಿಂದ ಬಂದಿದ್ದಾನೆ. ಅಪಘಾತವಾದರೂ ಆತ ನೋಡಿಲ್ಲ. ಜನರು ಕಿರುಚಿದ ಮೇಲೆ ಬಸ್ ನಿಲ್ಲಿಸಿದ್ದಾನೆ. ಆನಂತರ ಆತ ಪರಾರಿಯಾಗಲು ಯತ್ನಿಸಿದ್ದು, ಸ್ಥಳೀಯರು ಹಿಡಿದಿದ್ದಾರೆ ಎನ್ನಲಾಗಿದೆ.