ಬೆಂಗಳೂರು: ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಗಳ ರಿಸ್ಕ್ ಬೇಡ ಎಂದು, ಶೇ.7.5ರವರೆಗೆ ರಿಟರ್ನ್ಸ್ ನೀಡುವ ಬ್ಯಾಂಕ್ ನಿಶ್ಚಿತ ಠೇವಣಿ ಅಥವಾ ಎಫ್ ಡಿ ಖಾತೆಯಲ್ಲಿ ಹೆಚ್ಚಿನ ಜನ ಹಣ ಠೇವಣಿ ಮಾಡುತ್ತಾರೆ. ಆದರೆ, ಲಕ್ಷಾಂತರ ರೂಪಾಯಿ ನಿಶ್ಚಿತ ಠೇವಣಿ ಇರಿಸಿದಾಗ ಲಭಿಸುವ ಬಡ್ಡಿ ಆದಾಯಕ್ಕೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಆದರೆ, ಕೆಲ ನಿಗದಿತ ಫಾರ್ಮ್ ಗಳನ್ನು ಭರ್ತಿ ಮಾಡಿದರೆ, ಟಿಡಿಎಸ್ ಕಡಿತಗೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಸ್ಥಿರ ಠೇವಣಿಗಳಿಂದ ವರ್ಷಕ್ಕೆ ಲಭಿಸುವ ಆದಾಯ 40,000 ರೂಪಾಯಿ ದಾಟಿದಾಗ ಬ್ಯಾಂಕುಗಳು ಶೇ. 10ರಷ್ಟು ಟಿಡಿಎಸ್ ಕಡಿತಗೊಳಿಸಬೇಕು ಎನ್ನುವ ನಿಯಮ ಇದೆ. ಠೇವಣಿ ಮಾಡಿದದವರು ಹಿರಿಯ ನಾಗರಿಕರಾದರೆ ಬಡ್ಡಿ ಆದಾಯ 50,000 ರೂ.ಗಿಂತ ಹೆಚ್ಚಿದ್ದರೆ ಟಿಡಿಎಸ್ ಕಡಿತ ಮಾಡಲಾಗುತ್ತದೆ.
ಫಿಕ್ಸೆಡ್ ಡೆಪಾಸಿಟ್ನಲ್ಲಿ ಇಡುವ ಠೇವಣಿ 5.3 ಲಕ್ಷ ರೂ ದಾಟಿದರೆ ನಿಮ್ಮ ಬಡ್ಡಿ ಆದಾಯ 40,000 ರೂ. (ಶೇ.7.5ರ ರಿಟರ್ನ್ಸ್ ಲೆಕ್ಕಾಚಾರ) ದಾಟುತ್ತದೆ. ಆಗ ಟಿಡಿಎಸ್ ಕಡಿತ ಆಗಬಹುದು. ಗಮನಿಸಬೇಕಾದ ಸಂಗತಿ ಎಂದರೆ ಈ 40,000 ರೂ.ಗಿಂತ ಮೇಲಿನ ಬಡ್ಡಿ ಆದಾಯ ಇದ್ದಾಗ ಹೆಚ್ಚುವರಿ ಹಣಕ್ಕೆ ಟಿಡಿಎಸ್ ಕಡಿತ ಆಗುತ್ತದೆ. 40,000 ರೂ.ಗೆ ಟಿಡಿಎಸ್ ಅನ್ವಯ ಆಗುವುದಿಲ್ಲ. ಒಂದು ವೇಳೆ, ಬ್ಯಾಂಕ್ ಖಾತೆಗೆ ಪ್ಯಾನ್ ಲಿಂಕ್ ಮಾಡಿಲ್ಲದೇ ಇದ್ದರೆ ಆಗ ಶೇ. 20ರಷ್ಟು ಟಿಡಿಎಸ್ ಡಿಡಕ್ಟ್ ಆಗುತ್ತದೆ.
ಎಲ್ಲ ಆದಾಯವನ್ನೂ ಸೇರಿಸಿದಾಗ ಅದು ಇನ್ಕಮ್ ಟ್ಯಾಕ್ಸ್ ಎಕ್ಸೆಂಪ್ಷನ್ ವ್ಯಾಪ್ತಿಗೆ ಬರುತ್ತಿರಬಹುದು. ಆದರೂ ಬ್ಯಾಂಕ್ ಟಿಡಿಎಸ್ ಕಡಿತಗೊಳಿಸುತ್ತದೆ. ಆದರೂ, ಟಿಡಿಎಸ್ ಕಡಿತ ಆಗದಂತೆ ಮಾಡಲು ಸಾಧ್ಯ ಇದೆ. ಅದಕ್ಕೆ ನೀವು ಫಾರ್ಮ್ 15ಜಿ ಸಲ್ಲಿಸಬೇಕು. ಒಟ್ಟಾರೆ ಆದಾಯವು ಟ್ಯಾಕ್ಸಬಲ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಘೋಷಿಸುವ ಫಾರ್ಮ್ ಇದು. ಇದನ್ನು ಸಲ್ಲಿಸಿದಾಗ ಬ್ಯಾಂಕ್ ನಿಮ್ಮ ಎಫ್ಡಿ ಆದಾಯಕ್ಕೆ ತೆರಿಗೆ ಕಡಿತ ಮಾಡುವುದಿಲ್ಲ. ಹಿರಿಯ ನಾಗರಿಕರಾದರೆ ಫಾರ್ಮ್ 15ಎಚ್ ಅನ್ನು ಸಲ್ಲಿಸಬೇಕಾಗುತ್ತದೆ.