ಬೆಂಗಳೂರು: ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿದ್ದಾರೆ. ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 200 ವಿಕೆಟ್ಗಳನ್ನು ಪಡೆದ ದಕ್ಷಿಣ ಆಫ್ರಿಕಾದ ಮೊದಲ ಸ್ಪಿನ್ನರ್ ಎಂಬ ದಾಖಲೆ ಬರೆದಿದ್ದಾರೆ. ಎಡಗೈ ಸ್ಪಿನ್ನರ್ ಆಗಿರುವ ಮಹಾರಾಜ್, ತಮ್ಮ 59ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಇದುವರೆಗೂ ಅವರು ಒಟ್ಟು 202 ವಿಕೆಟ್ಗಳನ್ನು ಪಡೆದಿದ್ದು, ಇದರಲ್ಲಿ 11 ಬಾರಿ ಐದು ವಿಕೆಟ್ಗಳ ಗೊಂಚಲು ಮತ್ತು ಒಂದು ಪಂದ್ಯದಲ್ಲಿ 10 ವಿಕೆಟ್ಗಳ ಗೊಂಚಲು ಪಡೆದಿದ್ದಾರೆ.
ಜಿಂಬಾಬ್ವೆ ವಿರುದ್ಧದ ಮೊದಲ ಇನ್ನಿಂಗ್ಸ್ನಲ್ಲಿ 3 ವಿಕೆಟ್ಗಳನ್ನು ಕೀಳುವ ಮೂಲಕ ಕೇಶವ್ ಮಹಾರಾಜ್ ಈ ಸಾಧನೆಗೆ ಕಾರಣರಾದರು. ಮಹಾರಾಜ್ (70ಕ್ಕೆ3) ಮತ್ತು ವಿಯಾನ್ ಮಲ್ದರ್ (50ಕ್ಕೆ4) ಅವರ ಅಮೋಘ ಬೌಲಿಂಗ್ ಪ್ರದರ್ಶನದ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಮೊದಲ ಇನ್ನಿಂಗ್ಸ್ನಲ್ಲಿ 167 ರನ್ಗಳ ಭಾರಿ ಮುನ್ನಡೆ ಸಾಧಿಸಿತು.
ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಲುವಾನ್ ಡ್ರೆ ಪ್ರಿಟೋರಿಯಸ್ (153) ಮತ್ತು ಚೊಚ್ಚಲ ಶತಕ ಬಾರಿಸಿದ ಕಾರ್ಬಿನ್ ಬಾಶ್ (ಅಜೇಯ 100) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್ಗಳಿಗೆ 418 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಪ್ರತಿಯಾಗಿ, ಜಿಂಬಾಬ್ವೆ 67.4 ಓವರ್ಗಳಲ್ಲಿ 251 ರನ್ಗಳಿಗೆ ಆಲೌಟ್ ಆಯಿತು. ಜಿಂಬಾಬ್ವೆ ಪರ ಸೇನ್ ವಿಲಿಯಮ್ಸನ್ 16 ಬೌಂಡರಿಗಳ ನೆರವಿನಿಂದ 137 ರನ್ ಬಾರಿಸಿ ಮಿಂಚಿದರು.
ಪಂದ್ಯದ ಪ್ರಗತಿ
167 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ, ಎರಡನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ಗೆ 49 ರನ್ ಗಳಿಸಿದ್ದು, ಒಟ್ಟಾರೆ 216 ರನ್ಗಳ ಮುನ್ನಡೆಯಲ್ಲಿದೆ. ಟೋನಿ ಡಿ ಝಾರ್ಜಿ 22 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರೆ, ವಿಯಾನ್ ಮಲ್ದರ್ 25 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ.
ಸಂಕ್ಷಿಪ್ತ ಸ್ಕೋರ್ಗಳು:
- ದಕ್ಷಿಣ ಆಫ್ರಿಕಾ, ಮೊದಲ ಇನ್ನಿಂಗ್ಸ್: 9 ವಿಕೆಟ್ಗೆ 418 ಡಿಕ್ಲೇರ್ (ಲುವಾನ್ ಡ್ರೆ ಪ್ರಿಟೋರಿಯಸ್ 153, ಕಾರ್ಬಿನ್ ಬಾಶ್ 100*; ತನಕಾ ಚಿವಂಗಾ 83ಕ್ಕೆ 4, ಮುಜರಬಾನಿ 59ಕ್ಕೆ 2).
- ಜಿಂಬಾಬ್ವೆ, ಮೊದಲ ಇನ್ನಿಂಗ್ಸ್: 67.4 ಓವರ್ಗಳಲ್ಲಿ 251 ರನ್ಗಳಿಗೆ ಆಲೌಟ್ (ಸೀನ್ ವಿಲಿಯಮ್ಸ್ 137, ಕ್ರೇಗ್ ಇರ್ವಿನ್ 36; ಕೊಡಿ ಯೂಸುಫ್ 42ಕ್ಕೆ3, ವಿಯಾನ್ ಮಲ್ದರ್ 50ಕ್ಕೆ4, ಕೇಶವ್ ಮಹಾರಾಜ್ 70ಕ್ಕೆ3).
- ದಕ್ಷಿಣ ಆಫ್ರಿಕಾ, ದ್ವಿತೀಯ ಇನ್ನಿಂಗ್ಸ್: 13 ಓವರ್ಗಳಲ್ಲಿ 1 ವಿಕೆಟ್ಗೆ 49 (ಟೋನಿ ಡಿ ಝಾರ್ಜಿ ಬ್ಯಾಟಿಂಗ್ 22, ವಿಯಾನ್ ಮಲ್ದರ್ ಬ್ಯಾಟಿಂಗ್ 25).