ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಮಗಳ ಕಿಡ್ನಾಪ್ ಮಾಡಿಸಲು ಅಮ್ಮನೇ ಯತ್ನಿಸಿರುವ ವಿಫಲ ಘಟನೆಯೊಂದು ವರದಿಯಾಗಿದೆ.
ಸಿನಿಮಾ ಸ್ಟೈಲ್ ನಲ್ಲಿ ಮಗಳ ಕಿಡ್ನಾಪ್ ಮಾಡಲು ಯತ್ನಿಸಿ ವಿಫಲರಾಗಿದ್ದಾರೆ. ಶುಕ್ರವಾರ ರಾತ್ರಿ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿ ಈ ಘಟನೆ ನಡೆದಿದೆ. ಶೋಭಾ ಎಂಬ ತಾಯಿ ದಿವ್ಯಾ ಎಂಬ ತಮ್ಮ ಮಗಳನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಶೋಭಾ ಬೊಮ್ಮಸಂದ್ರ ನಿವಾಸಿ. ಮಗಳು ದಿವ್ಯಾ ಕಳೆದ 8 ವರ್ಷಗಳಿಂದ ಸಂಜಯ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಮಗಳ ಪ್ರೀತಿಗೆ ತಾಯಿ ದಿವ್ಯಾ ವಿರೋಧ ವ್ಯಕ್ತಪಡಿಸಿದ್ದಳು. ಪೋಷಕರನ್ನು ಬಿಟ್ಟು ಪ್ರಿಯಕರನ ಜೊತೆ ವಾರದ ಹಿಂದೆ ದಿವ್ಯಾ ಮದುವೆಯಾಗಿದ್ದಾಳೆ.
ಇನ್ನೊಂದೆಡೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಯುವತಿ ಮಿಸ್ಸಿಂಗ್ ದೂರು ದಾಖಲಿಸಲಾಗಿತ್ತು. ಠಾಣೆಗೆ ಬಂದಿದ್ದ ಯುವತಿ ಪರಸ್ಪರ ಒಪ್ಪಿ ಮದುವೆಯಾಗಿರುವುದಾಗಿ ತಿಳಿಸಿದ್ದಳು. ಆದರೆ, ಶುಕ್ರವಾರ ರಾತ್ರಿ ಯುವಕನ ಮನೆಗೆ ನುಗ್ಗಿದ ತಾಯಿ, ತಂದೆ ಶ್ರೀನಿವಾಸ್ ಗೆ ಹೃದಯಾಘಾತ ಆಗಿದೆ. ಜಯದೇವ ಆಸ್ಪತ್ರೆಗೆ ತನ್ನ ಜೊತೆ ಕಾರಿನಲ್ಲಿ ಬರುವಂತೆ ಒತ್ತಾಯ ಮಾಡಿದ್ದಾಳೆ. ಆದರೆ, ಮಗಳು ದಿವ್ಯಾ ಪತಿ ಸಂಜಯ್ ಹಾಗೂ ನಾದಿನಿ ಸಿಂಧೂ ಜೊತೆ ಬಂದಿದ್ದಾಳೆ. ಆಗ ಸಿನಿಮಾ ಸ್ಟೈಲ್ ನಲ್ಲಿ ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ.
ಚಂದಾಪುರ ಬಳಿ ಬೈಕ್ ಗೆ ಡಿಕ್ಕಿ ಹೊಡೆಸಿ ದಿವ್ಯಾಳನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಪತಿ ಸಂಜಯ್ ಕಾಲಿಗೆ ಗಾಯಗಳಾಗಿವೆ. ಇಲ್ಲಿಂದ ತಪ್ಪಿಸಿಕೊಂಡ ಜೋಡಿ ಜಿಗಣಿ ಠಾಣೆಗೆ ಬಂದಿದೆ. ಸದ್ಯ ಪೊಲೀಸರು ನವ ಜೋಡಿಗೆ ಆಶ್ರಯ ನೀಡಿದ್ದಾರೆ. ಈ ಕುರಿತು ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.