ಚಿಕ್ಕೋಡಿ: ಫೈನ್ ಕಟ್ಟಲಿಲ್ಲ ಎಂದು ಅವಾಚ್ಯವಾಗಿ ನಿಂದಿಸಿ ತಾಯಿ ಹಾಗೂ ಮಗನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಅಂಕಲಿ ಪೊಲೀಸರು ಮಹಿಳೆ ಹಾಗೂ ಮಗನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಾಯಿ ಹಾಗೂ ಮಗ ರಿಷಿಕೇಶ್ ಲಿಂಬಿಗಿಡದ್ ಬೈಕ್ ಮೇಲೆ ಹೋಗುತ್ತಿದ್ದ ವೇಳೆ ಹೆಲ್ಮೆಟ್ ಹಾಕಿಲ್ಲವೆಂದು ಪೊಲೀಸರು ಬೈಕ್ ನಿಲ್ಲಿಸಿದ್ದಾರೆ. ಆ ವೇಳೆ ಫೈನ್ ಕಟ್ಟುವಂತೆ ಹೇಳಿದ್ದಾರೆ.
ತನ್ನ ಬಳಿ ಕೇವಲ ಐದುನೂರು ಇದೆ. ಪೆಟ್ರೋಲ್ ಹಾಕಲು ಇನ್ನೂರು ರೂಪಾಯಿ ಬೇಕು. ಹೀಗಾಗಿ ಮೂರು ನೂರು ರೂ. ಕೊಡುತ್ತೇನೆಂದು ರಿಷಿಕೇಶ್ ಹೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ಪೊಲೀಸರು ಹಲ್ಲೆ ಮಾಡಿದ್ದಾರೆಂದು ತಾಯಿ ಹಾಗೂ ಮಗ ಆರೋಪಿಸಿದ್ದಾರೆ. ಹಲ್ಲೆ ಮಾಡಿದ್ದಲ್ಲದೇ ಮಗ ಹಾಗೂ ತಾಯಿ ಮೇಲೆ ಕರ್ತವ್ಯಕ್ಕೆ ಅಡ್ಡಿ ಮಾಡಿರುವ ಕೇಸ್ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಪೊಲೀಸರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.