ಕೊಡಗು: ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಇನ್ನೂ ತಗ್ಗುತ್ತಿಲ್ಲ. ಪರಿಣಾಮ ಬಹುತೇಕ ಕಡೆ ಜನ- ಜೀವನ ಅಸ್ತವ್ಯಸ್ಥಗೊಂಡಿದೆ. ಈ ಹಿನ್ನೆಲೆಯಲ್ಲಿ ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜ ಆದೇಶ ಹೊರಡಿಸಿದ್ದಾರೆ.
ಕೊಡಗು ಜಿಲ್ಲೆ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ 80 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಕೆಆರ್ಎಸ್ (KRS) ಭರ್ತಿ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಬಾಗಿನ ಅರ್ಪಿಸಲಿದ್ದಾರೆ. ಕೆಆರ್ಎಸ್ಗೆ 50,000 ಕ್ಯೂಸೆಕ್ ಒಳಹರಿವಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಹಾರಂಗಿ ಹಾಗೂ ಹೇಮಾವತಿ ಡ್ಯಾಮ್ ಗಳಿಂದಲೂ ನೀರು ಹೊರ ಬಿಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕೂಡ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ಮಲಪ್ರಭೆ, ಕೃಷ್ಣ ಸೇರಿದಂತೆ ಹಲವಾರು ನದಿಗಳು ತುಂಬಿ ಹರಿಯುತ್ತಿವೆ. ಕರಾವಳಿ, ಮಲೆನಾಡು, ಉತ್ತರ ಒಳನಾಡಿನ ಬಹುತೇಕ ಕಡೆ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಲವೆಡೆ ಮುಂಗಾರು ರೈತರ ನೆಮ್ಮದಿ ಕಸಿದಿದೆ.