ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯ ನಡೆಸುತಿದ್ದು, ಪಾಲಿಕೆಯ ಎಲ್ಲಾ 8 ವಲಯಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಸ್ಟಿಕ್ಕರ್ ಅಂಟಿಸಲಾಗುತ್ತಿದೆ.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ 101 ಜಾತಿಗಳಿಗೆ ಸೇರಿದವರ ಪ್ರಾತಿನಿದ್ಯತೆ ಕುರಿತು ವೈಜ್ಞಾನಿಕ ದತ್ತಾಂಶವನ್ನು ಸಂಗ್ರಹಿಸಲಾಗುತ್ತಿದ್ದು, 30ನೇ ಜೂನ್ 2025 ರವರೆಗೆ ಅಂತಿಮವಾಗಿ ಅವಧಿ ವಿಸ್ತರಿಸಲಾಗಿದೆ. ಪರಿಶಿಷ್ಟ ಜಾತಿ ಸಮೀಕ್ಷೆ ನಡೆಸಿರುವ ಕುರಿತು ಖಾತರಿಪಡಿಸಿಕೊಳ್ಳುವ ಸಲುವಾಗಿ ಪಾಲಿಕೆಯ ತಂಡವು ಮನೆ-ಮನೆ ಭೇಟಿ ನೀಡಿ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಸಕ್ರಿಯವಾಗಿದೆ.
ನಗರದಾದ್ಯಂದ ಪರಿಶಿಷ್ಟ ಸಮೀಕ್ಷಾ ಕಾರ್ಯವು ಪರಿಣಾಮಕಾರಿಯಾಗಿ ನಡೆಯುತ್ತಿದ್ದು, ಪ್ರತಿ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿರುವ ಕುರಿತು ಖಾತರಿಪಡಿಸಿಕೊಂಡು ಮನೆಯ ಬಾಗಿಲು ಅಥವಾ ಗೋಡೆಗೆ ಸ್ಟಿಕ್ಕರ್ ಅಂಟಿಸಲಾಗುತ್ತಿದೆ.
ಹಿರಿಯ ಅಧಿಕಾರಿಗಳಿಂದ ಮೇಲ್ವಿಚಾರಣೆ:
ಪಾಲಿಕೆ ಎಲ್ಲಾ 8 ವಲಯಗಳಲ್ಲಿ ಇಂದಿನಿಂದ ಸ್ಟಿಕ್ಕರ್ ಅಂಟಿಸುವ ಕಾರ್ಯ ಪ್ರಾರಂಭವಾಗಿದ್ದು, ಆಯಾ ವಲಯಗಳ ವಲಯ ಆಯುಕ್ತರು ಹಾಗೂ ವಲಯ ಜಂಟಿ ಆಯುಕ್ತರು ಮನೆ-ಮನೆಗೆ ಭೇಟಿ ನೀಡಿ ಸ್ಟಿಕ್ಕರ್ ಅಂಟಿಸುವ ಕಾರ್ಯವನ್ನು ಖುದ್ದು ಪರಿಶೀಲಿಸುತ್ತಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ನಾಗರಿರಲ್ಲಿ ಮನವಿ:
ನಗರದಲ್ಲಿ ಈಗಾಗಲೇ 1.84 ಲಕ್ಷ ಪರಿಶಿಷ್ಟ ಜಾತಿ ಕುಟುಂಬಗಳು, 32 ಲಕ್ಷ ಸಾಮಾನ್ಯ ಕುಟುಂಬಗಳನ್ನು ಸುಮಾರು 11 ಸಾವಿರ ಗಣತಿದಾರರ ಮುಖಾಂತಾರ ಸಮೀಕ್ಷೆ ಕಾರ್ಯವನ್ನು ನಡೆಸಲಾಗಿದೆ. ಈ ಪೈಕಿ 6.72 ಲಕ್ಷ ಪರಿಶಿಷ್ಟ ಸದಸ್ಯರನ್ನು ಗುರುತಿಸಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳದೇ ಇರುವವರಿಗೆ ಕೂಡಲೇ ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳಲು ಮನವಿ ಮಾಡಲಾಗುತ್ತಿದೆ.
ಸ್ಟಿಕ್ಕರ್ ಅಂಟಿಸಲು ಸ್ವಯಂ ಸೇವಕರ ತಂಡ ರಚನೆ:
ಸಮೀಕ್ಷೆ ಕಾರ್ಯ ಪೂರ್ಣಗೊಂಡಿರುವ ಮನೆಗಳಿಗೆ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ಕೆ ಕಾಲೇಜುಗಳ ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ ವಿದ್ಯಾರ್ಥಿಗಳ ಸ್ವಯಂಸೇವಕರ ತಂಡಗಳನ್ನು ರಚನೆ ಮಾಡಲಾಗಿದೆ. ವಿದ್ಯಾರ್ಥಿಗಳು ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿರುವುದನ್ನು ಖಾತರಿಪಡಿಸಿಕೊಂಡು ಸ್ಟಿಕ್ಕರ್ ಅಂಟಿಸುತ್ತಿದ್ದಾರೆ. ಒಂದು ವೇಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳದಿದ್ದಲ್ಲಿ ಸ್ಟಿಕ್ಕರ್ ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಆನ್ ಲೈನ್ ಮೂಲಕ ಸ್ವಯಂ ಪ್ರೇರಿತವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಕುರಿತು ಜಾಗೃತಿ ಮೂಡಿಸಲಿದ್ದಾರೆ.
ಇಲ್ಲವಾದಲ್ಲಿ ಹತ್ತಿರದ ಬೆಂಗಳೂರು ಒನ್, ಬಿಬಿಎಂಪಿ ವಾರ್ಡ್ ಕಚೇರಿಗಳ ಶಿಬಿರಗಳಿಗೆ ಭೇಟಿ ನೀಡಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಬೆಂಗಳೂರು ನಗರದಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯವನ್ನು ಶೇ. 100 ರಷ್ಟು ಗುರಿ ಸಾಧಿಸುವ ಸಲುವಾಗಿ ಎಲ್ಲಾ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಬೆಂಗಳೂರು ನಗರದ ನಾಗರಿಕರೆಲ್ಲರೂ ಸಮೀಕ್ಷೆಯಲ್ಲಿ ತಪ್ಪದೆ ಭಾಗವಹಿಸಿ ಶೇ. 100 ಗುರಿ ತಲುಪಲು ಸಹಕರಿಸುವಂತೆ ಕೋರಿದೆ