ದುಡ್ಡಿನ ವಿಚಾರದಲ್ಲಿ ಈಗ ಕಾಲವೂ ಬದಲಾಗಿದೆ. 60 ವರ್ಷದತನಕ ದುಡಿಯುತ್ತೇನೆ, ನಂತರ ಪಿಂಚಣಿ ದುಡ್ಡಲ್ಲಿ ಉಳಿದ ಜೀವನ ಸಾಗಿಸುತ್ತೇನೆ ಎಂಬ ಕಾಲ ಇದಲ್ಲ. ಹಣದುಬ್ಬರ ಏರಿಕೆಯಾಗುತ್ತಲೇ ಇರುತ್ತದೆ. ಪ್ರತಿಯೊಂದು ವಸ್ತುಗಳ ಬೆಲೆಯೂ ಏರಿಕೆಯಾಗುತ್ತಲೇ ಇರುತ್ತದೆ. ಹಾಗಾಗಿ, 30-40 ವರ್ಷ ತುಂಬುತ್ತಲೇ, ನಿವೃತ್ತಿಗೆ ಹೂಡಿಕೆ ಆರಂಭಿಸಬೇಕಾಗುತ್ತದೆ. ನಿಮಗೀಗ, 40 ವರ್ಷ ತುಂಬಿದ್ದು, ಉಳಿತಾಯ, ಹೂಡಿಕೆ ಇಲ್ಲ, ಮುಂದೇನು ಮಾಡಬೇಕು ಎಂಬ ಚಿಂತೆ ಕಾಡುತ್ತಿದೆಯೇ? ಚಿಂತೆ ಬೇಡ, ನಿಮಗಿನ್ನೂ ಕಾಲ ಮಿಂಚಿಲ್ಲ. ನಿಯಮಿತ ಹೂಡಿಕೆ ಮಾಡುವ ಮೂಲಕ ನೀವು ನಿವೃತ್ತಿ ಜೀವನವನ್ನು ಸುಲಭವಾಗಿ ಕಳೆಯಬಹುದಾಗಿದೆ. ಹೇಗೆ ಅನ್ನೋದನ್ನ ನಾವು ನಿಮಗೆ ತಿಳಿಸಿಕೊಡ್ತೇವೆ ನೋಡಿ.
ನಿಮಗೀಗ 40 ವರ್ಷ ತುಂಬಿದೆಯೇ?
ಹೂಡಿಕೆ ಇಲ್ಲ ಎಂಬ ಚಿಂತೆ ಕಾಡುತ್ತಿದೆಯೇ?
ನಿವೃತ್ತಿ ಬಳಿಕ ಏನು ಎಂಬ ಆತಂಕ ಇದೆಯೇ?
ನಿಮಗೆ 40 ವರ್ಷ ತುಂಬಿದೆ, ಉಳಿತಾಯ, ಹೂಡಿಕೆ ಮಾಡಿಲ್ಲ ಎಂಬ ಚಿಂತೆ ಬೇಡ. ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ನೀವು ನಿಯಮಿತವಾಗಿ ಹೂಡಿಕೆ ಮಾಡುತ್ತ ಹೋದರೆ, 60 ವರ್ಷ ತುಂಬುವ ಹೊತ್ತಿಗೆ ನಿಮ್ಮ ಬಳಿ ಒಂದು ಕೋಟಿ ರೂಪಾಯಿ ಇರುತ್ತದೆ. ಅದೇ ಒಂದು ಕೋಟಿ ರೂಪಾಯಿಯನ್ನು ನಿಯಮಿತವಾಗಿ ಹೂಡಿಕೆ ಮಾಡಿದರೆ, ನಿವೃತ್ತಿ ಜೀವನವನ್ನು ಯಾವುದೇ ಚಿಂತೆ ಇಲ್ಲದೆ ಕಳೆಯಬಹುದಾಗಿದೆ.
ತಿಂಗಳಿಗೆ 6,600 ರೂಪಾಯಿ ಹೂಡಿಕೆ ಮಾಡಿ
ಮುಂದಿನ 20 ವರ್ಷಗಳಿಗೆ ಹೂಡಿಕೆ ಇರಲಿ
ಕೊನೆಗೆ ಸಿಗಲಿದೆ ಒಂದು ಕೋಟಿ ರೂಪಾಯಿ
ಮ್ಯೂಚುವಲ್ ಫಂಡ್ ಎಸ್ಐಪಿಯು ಸುದೀರ್ಘ ಹೂಡಿಕೆಯಲ್ಲಿ ಲಾಭದಾಯಕವಾಗಿರುತ್ತದೆ. ನೀವು ಈಗಿನಿಂದಲೇ ಮಾಸಿಕ 6,600 ರೂಪಾಯಿ ಹೂಡಿಕೆ ಮಾಡುತ್ತ ಹೋದರೆ, 20 ವರ್ಷದಲ್ಲಿಯೇ ಕೋಟಿ ರೂಪಾಯಿ ಗಳಿಸಬಹುದಾಗಿದೆ. ತಿಂಗಳಿಗೆ 6,600 ರೂಪಾಯಿ ಎಸ್ಐಪಿ ಕಟ್ಟಬೇಕು. ವರ್ಷಕ್ಕೆ ಶೇ.10ರಷ್ಟು ಎಸ್ಐಪಿ ಹೆಚ್ಚಿಸುತ್ತ ಹೋಗಬೇಕು. ಕೊನೆಗೆ ನೀವು 20ನೇ ವರ್ಷದಲ್ಲಿ ಶೇ.15ರಷ್ಟು ರಿಟರ್ನ್ಸ್ ಎಂದರೂ, 1 ಕೋಟಿ ರೂಪಾಯಿಯನ್ನು ನಿಮ್ಮದಾಗಿಸಿಕೊಳ್ಳುತ್ತೀರಿ.
ಈಗಿನಿಂದಲೇ ನಿಮಗೇಕೆ ಹೂಡಿಕೆ ಮುಖ್ಯ?
ಹಣದುಬ್ಬರ ವರ್ಷಕ್ಕೆ ಶೇ.6ರಷ್ಟು ಏರಿಕೆ
ಖರ್ಚಿನ ಮೊತ್ತ 20 ವರ್ಷದ ಬಳಿಕ ಎಷ್ಟು ಗೊತ್ತಾ?
ಹಾಗೆ ನೋಡಿದರೆ, ಉದ್ಯೋಗಕ್ಕೆ ಸೇರುತ್ತಲೇ ಎಸ್ಐಪಿ ಹೂಡಿಕೆಯನ್ನು ಆರಂಭಿಸಬೇಕು. ಹಾಗೊಂದು ವೇಳೆ, ಹೂಡಿಕೆ ಮಾಡಲಾಗದೆ, ಈಗ 40 ವರ್ಷ ತುಂಬಿದ್ದರೆ, ಈಗಿನಿಂದಲೇ ಹೂಡಿಕೆ ಆರಂಭಿಸುವುದು ಒಳಿತು. ಏಕೆಂದ್ರೆ, ವರ್ಷದಿಂದ ವರ್ಷಕ್ಕೆ ಹಣದುಬ್ಬರವು ಶೇ.6ರಷ್ಟು ಏರಿಕೆಯಾಗುತ್ತದೆ. ಈಗ ನಮ್ಮ ತಿಂಗಳ ಖರ್ಚು 1 ಲಕ್ಷ ರೂಪಾಯಿ ಇದ್ದರೆ, ಇದೇ ಖರ್ಚು 20 ವರ್ಷಗಳ ಬಳಿಕ 3.2 ಲಕ್ಷ ರೂಪಾಯಿ ಆಗುತ್ತದೆ. ಈ ಹಣದುಬ್ಬರವನ್ನು ಮೀರಬೇಕು ಎಂದರೆ ಹೂಡಿಕೆ ಮಾಡುವುದು ಅತ್ಯಗತ್ಯವಾಗಿದೆ.
ಮೊಬೈಲ್ ನಲ್ಲೇ ಮಾಡಬಹುದು ಈಗ ಹೂಡಿಕೆ
ಫೋನ್ ಪೇ, ಪೇಟಿಎಂನಂತಹ ಆ್ಯಪ್ ಇದ್ದರೆ ಸಾಕು
ಸ್ಮಾರ್ಟ್ ಫೋನ್ನಲ್ಲಿ ಸ್ಮಾರ್ಟ್ ಹೂಡಿಕೆ, ಗಳಿಕೆ ಸಾಧ್ಯ
ಸ್ಮಾರ್ಟ್ ಫೋನ್ ಇದ್ದರೂ ಸಾಕು, ನೀವೀಗ ಹೂಡಿಕೆದಾರ ಆಗಬಹುದು. ಅದರಲ್ಲೂ, ಫೋನ್ ಪೇ, ಪೇಟಿಎಂ, ಗ್ರೋ ನಂತಹ ಆ್ಯಪ್ ಗಳಲ್ಲಿ ಉಚಿತವಾಗಿ ಹೂಡಿಕೆ ಮಾಡಬಹುದಾಗಿದೆ. ಎಕ್ಸಿಡ್ ಲೋಡ್ ಶುಲ್ಕ ಎಷ್ಟಿದೆ ಎಂಬುದರ ಮೇಲೆ ನಿಮ್ಮ ಹೂಡಿಕೆಯ ಕೊನೆಗೆ ಶುಲ್ಕ ನಿಗದಿಯಾಗುತ್ತದೆ.
ಹಾಗಾಗಿ, ನಿಮಗೀಗ ಎಷ್ಟೇ ವಯಸ್ಸಾಗಿರಲಿ. ಎಷ್ಟೇ ಕಡಿಮೆ ಸಂಬಳ, ಆದಾಯವೇ ಬರುತ್ತಿರಲಿ. ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ನಿಮ್ಮಿಂದ ಸಾಧ್ಯವಾಗುವ ಮೊತ್ತವನ್ನು ಹೂಡಿಕೆ ಮಾಡುತ್ತಲೇ ಹೋಗಿ. ಕನಿಷ್ಠ 10-15 ವರ್ಷಗಳ ಹಣಕಾಸು ಗುರಿಗಳೊಂದಿಗೆ ಹೂಡಿಕೆ ಆರಂಭಿಸಿ. ಮುಂದೊಂದು ದಿನ ನಿಮಗದೂ ಉತ್ತಮ ಆದಾಯ ತಂದುಕೊಡುವುದು ನಿಶ್ಚಿತ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಮತ್ತಿನ್ನೇಕೆ ತಡ, ಈಗಿನಿಂದಲೇ ಹೂಡಿಕೆ ಆರಂಭಿಸಿ.
Disclaimer
ಮ್ಯೂಚುವಲ್ ಫಂಡ್ ಹೂಡಿಕೆಯ ಎಸ್ಐಪಿಯು ಮಾರುಕಟ್ಟೆ ಆಧಾರಿತವಾಗಿರುತ್ತದೆ. ಇದು ಏರಿಕೆಯೂ ಆಗಬಹುದು, ಇಳಿಕೆಯನ್ನೂ ಕಾಣಬಹುದು. ನಾವು ನಿಮಗೆ ಇಲ್ಲಿ ನೀಡಿರುವ ಉದಾಹರಣೆಯು ಮಾಹಿತಿ ದೃಷ್ಟಿಯಿಂದ ಮಾತ್ರವೇ ಹೊರತು, ಹೂಡಿಕೆಯ ಶಿಫಾರಸು ಅಲ್ಲ. ಹಾಗಾಗಿ, ಹೂಡಿಕೆಗೂ ಮುನ್ನ ತಜ್ಞರ ಸಲಹೆ-ಸೂಚನೆಗಳನ್ನು ಪಡೆಯೋದು ಕಡ್ಡಾಯವಾಗಿದೆ.