ಟೆಹ್ರಾನ್: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಇಸ್ರೇಲ್ನ ಸೇನೆ ಇಂದು ಇರಾನ್ನ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಮತ್ತು ಪರಮಾಣು ಸ್ಥಳಗಳ ಮೇಲೆ ಮತ್ತೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ, ಇರಾನ್ ಇಸ್ರೇಲ್ನ ಮೇಲೆ ಹೊಸ ಕ್ಷಿಪಣಿ ದಾಳಿಯನ್ನು ಆರಂಭಿಸಿದೆ. ಇಸ್ರೇಲ್ ನಡೆಸಿದ ದಾಳಿಯಿಂದಾಗಿ ಇರಾನ್ನಲ್ಲಿ 80 ಮಂದಿ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಇಂದಿನ ಪ್ರಮುಖ ಬೆಳವಣಿಗೆಗಳು:
ಇಸ್ರೇಲ್ನ ದಾಳಿ: ಇಸ್ರೇಲ್ನ ರಕ್ಷಣಾ ಪಡೆಗಳು (IDF) ಟೆಹ್ರಾನ್ನಲ್ಲಿರುವ ಇರಾನ್ನ ರಕ್ಷಣಾ ಸಚಿವಾಲಯದ ಕೇಂದ್ರ ಕಚೇರಿಯನ್ನು ಗುರಿಯಾಗಿಸಿ ಹಾಗೂ ಇರಾನ್ನ ಪರಮಾಣು ಯೋಜನೆಗೆ ಸಂಬಂಧಿಸಿದ ಸ್ಥಳಗಳ ಮೇಲೆ ನಿರಂತರವಾಗಿ ದಾಳಿಗಳನ್ನು ನಡೆಸುತ್ತಿವೆ. ಈ ದಾಳಿಗಳು ಇರಾನ್ನ ಪರಮಾಣು ಶಸ್ತ್ರಾಸ್ತ್ರ ಯೋಜನೆಯನ್ನು ತಡೆಯುವ ಗುರಿಯನ್ನು ಹೊಂದಿವೆ ಎಂದು ಐಡಿಎಫ್ ತಿಳಿಸಿದೆ.
ಇರಾನ್ನ ಪ್ರತಿದಾಳಿ: ಇಸ್ರೇಲ್ನ ದಾಳಿಗೆ ಪ್ರತಿಕ್ರಿಯೆಯಾಗಿ, ಇರಾನ್ ಶನಿವಾರ ಇಸ್ರೇಲ್ನ ವಿರುದ್ಧ ಭಾರೀ ಸಂಖ್ಯೆಯ ಕ್ಷಿಪಣಿಗಳನ್ನು ಉಡಾಯಿಸಿದೆ. ಟೆಲ್ ಅವೀವ್ ಮತ್ತು ಜೆರುಸಲೆಮ್ನಲ್ಲಿ ಭಾರೀ ಸ್ಫೋಟಗಳು ಕೇಳಿಬಂದಿದ್ದು, ಕೆಲವು ಕ್ಷಿಪಣಿಗಳು ಇಸ್ರೇಲ್ನ ವಾಯು ರಕ್ಷಣಾ ವ್ಯವಸ್ಥೆಯನ್ನೇ ಭೇದಿಸಿವೆ. ಈ ದಾಳಿಗಳಿಂದ ಇಸ್ರೇಲ್ನಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಟೆಹ್ರಾನ್ನಲ್ಲಿ ಹಲವರ ಸಾವು: ಇಸ್ರೇಲ್ನ ದಾಳಿಗಳಿಂದ ಇರಾನ್ನ ರಾಜಧಾನಿ ಟೆಹ್ರಾನ್ನಲ್ಲಿ ಭಾರೀ ಸ್ಫೋಟಗಳು ಸಂಭವಿಸಿದ್ದು, ಶಹರಾನ್ ತೈಲ ಡಿಪೋ ಸೇರಿದಂತೆ ಪ್ರಮುಖ ಶಕ್ತಿ ಸೌಲಭ್ಯಗಳಿಗೆ ಹಾನಿಯಾಗಿದೆ. ಇರಾನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದ್ದು, ದಾಳಿಯಿಂದ 80ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಮತ್ತು 320 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಅಂತರರಾಷ್ಟ್ರೀಯ ಪ್ರತಿಕ್ರಿಯೆ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ಪರಮಾಣು ಒಪ್ಪಂದಕ್ಕೆ ಒಪ್ಪಿಕೊಳ್ಳದಿದ್ದರೆ ಇನ್ನಷ್ಟು ತೀವ್ರವಾದ ದಾಳಿಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಇಸ್ರೇಲ್ ಮೇಲೆ ದಾಳಿ ನಡೆಸುವ ಮೂಲಕ ಇರಾನ್ ಪ್ರಚೋದನೆ ಹೆಚ್ಚಿಸಿದರೆ ಅಮೆರಿಕವು ತನ್ನೆಲ್ಲ ಶಕ್ತಿಯನ್ನೂ ಬಳಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಆದರೆ, ಇರಾನ್ನ ವಿದೇಶಾಂಗ ಸಚಿವಾಲಯವು ಇಸ್ರೇಲ್ನ “ಕ್ರೂರ” ದಾಳಿಗಳು ಮುಂದುವರಿದರೆ ಮಾತುಕತೆಗೆ ಸಾಧ್ಯವಿಲ್ಲ ಎಂದು ತಿಳಿಸಿದೆ. ಅಲ್ಲದೇ, ಅಮೆರಿಕದ ಜತೆಗೆ ಮಾತುಕತೆ ನಡೆಸುವುದೇ ಅರ್ಥಹೀನ ಎಂದಿದೆ.
ನೆತನ್ಯಾಹು ಎಚ್ಚರಿಕೆ: ಇಸ್ರೇಲ್ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು, ಈ ದಾಳಿಗಳು ಕೇವಲ ಆರಂಭವಷ್ಟೇ ಎಂದು ಎಚ್ಚರಿಕೆ ನೀಡಿದ್ದಾರೆ. ಇರಾನ್ನ ಪರಮಾಣು ಯೋಜನೆಯನ್ನು ತಡೆಯಲು ಇಸ್ರೇಲ್ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಲಿದೆ. ಇಸ್ರೇಲ್ ಸದ್ಯದಲ್ಲೇ ಹೊತ್ತಿ ಉರಿಯಲಿದೆ ಎಂದು ಅವರು ಹೇಳಿದ್ದಾರೆ.