ನವದೆಹಲಿ: ಇರಾನ್ ಮೇಲೆ ಕ್ಷಿಪಣಿ, ಡ್ರೋನ್ ದಾಳಿ ಆರಂಭಿಸಿರುವ ಇಸ್ರೇಲ್ ಸೇನೆಯು ಶುಕ್ರವಾರ ರಾತ್ರಿ ಮಾಡಿರುವ ಟ್ವೀಟ್‌ವೊಂದು ಭಾರತೀಯರ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ಇಸ್ರೇಲ್ ರಕ್ಷಣಾ ಪಡೆ (IDF) ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ತೋರಿಸಿರುವಂಥ ನಕ್ಷೆಯನ್ನು ಹಂಚಿಕೊಂಡಿದೆ. ಇದಕ್ಕೆ ಭಾರತೀಯ ನೆಟ್ಟಿಗರು ಕೆಂಡಾಮಂಡಲರಾಗಿದ್ದು, ಇಸ್ರೇಲ್ ವಿರುದ್ಧ ಹರಿಹಾಯ್ದಿದ್ದಾರೆ. ಕೊನೆಗೆ ಇಸ್ರೇಲ್ ಸೇನಾಪಡೆ ಭಾರತೀಯರ ಕ್ಷಮೆ ಯಾಚಿಸಿದೆ.
ಶುಕ್ರವಾರ ರಾತ್ರಿ ಎಕ್ಸ್(ಟ್ವಿಟರ್)ನಲ್ಲಿ ಇಸ್ರೇಲ್ ಸೇನೆಯು ಇರಾನ್ ಅನ್ನು “ಜಾಗತಿಕ ಬೆದರಿಕೆ” ಎಂದು ಚಿತ್ರಿಸುವ ಸಂದೇಶವೊಂದನ್ನು ಹಂಚಿಕೊಂಡಿತ್ತು. ಆದರೆ, ಇಸ್ರೇಲ್ ಪೋಸ್ಟ್ ಮಾಡಿದ್ದ ನಕ್ಷೆಯು ಭಾರತದ ಗಡಿಗಳನ್ನು ತಪ್ಪಾಗಿ ಚಿತ್ರಿಸಿತ್ತು. ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಹೊರಗಿಟ್ಟು ಪಾಕಿಸ್ತಾನದ ಭಾಗವೆಂದು ಅದರಲ್ಲಿ ತೋರಿಸಲಾಗಿತ್ತು. ಇದಕ್ಕೆ ಭಾರತೀಯ ಬಳಕೆದಾರರು ತಕ್ಷಣ ಆಕ್ಷೇಪ ವ್ಯಕ್ತಪಡಿಸಿ, ತಪ್ಪನ್ನು ಸರಿಪಡಿಸುವಂತೆ ಪಟ್ಟು ಹಿಡಿಯಲಾರಂಭಿಸಿದರು.
ಕೊನೆಗೆ ಈ ಆಕ್ಷೇಪಕ್ಕೆ ಮಣಿದ ಇಸ್ರೇಲ್ ಸೇನಾಪಡೆ, “ಈ ಪೋಸ್ಟ್ ಒಟ್ಟಾರೆ ಪ್ರದೇಶದ ಒಂದು ಚಿತ್ರಣವಾಗಿದೆ. ಈ ನಕ್ಷೆಯು ಗಡಿಗಳನ್ನು ನಿಖರವಾಗಿ ಚಿತ್ರಿಸಲು ವಿಫಲವಾಗಿದೆ. ಇದರಿಂದ ಉಂಟಾದ ಯಾವುದೇ ಅಪಮಾನ ಹಾಗೂ ಘಾಸಿಗೆ ನಾವು ಕ್ಷಮೆಯಾಚಿಸುತ್ತೇವೆ,” ಎಂದು ತಿಳಿಸಿತು.
ನಕ್ಷೆಯು ಇರಾನ್‌ನ ಕ್ಷಿಪಣಿಗಳ ವ್ಯಾಪ್ತಿಯನ್ನು ತೋರಿಸುವ ಉದ್ದೇಶದಿಂದ ರಚಿತವಾಗಿತ್ತು. ಸೌದಿ ಅರೇಬಿಯಾ, ಲಿಬಿಯಾ, ಇಥಿಯೋಪಿಯಾ, ಭಾರತ, ಚೀನಾ, ಕಜಕಿಸ್ತಾನ್, ರೊಮೇನಿಯಾ, ಬಲ್ಗೇರಿಯಾ, ರಷ್ಯಾ, ಟರ್ಕಿ ಮತ್ತು ಇತರ ದೇಶಗಳನ್ನು ಒಳಗೊಂಡಂತೆ ವ್ಯಾಪಕ ಪ್ರದೇಶವನ್ನು ಇದರಲ್ಲಿ ಗುರುತಿಸಲಾಗಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ ಪಾಕಿಸ್ತಾನದ ಭಾಗವೆಂದು ತೋರಿಸಲಾಗಿತ್ತು. ಇದು ಭಾರತದ ದೃಷ್ಟಿಕೋನದಲ್ಲಿ ತೀರಾ ಸೂಕ್ಷ್ಮವಾದ ವಿಷಯವಾಗಿದೆ. ಭಾರತವು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಎಲ್ಲಾ ಭಾಗಗಳು, ಪಾಕಿಸ್ತಾನ ಮತ್ತು ಚೀನಾದಿಂದ ಅಕ್ರಮವಾಗಿ ಆಕ್ರಮಿತವಾದ ಪ್ರದೇಶಗಳನ್ನು ಒಳಗೊಂಡಂತೆ, ತನ್ನ ಅವಿಭಾಜ್ಯ ಮತ್ತು ಅನನ್ಯ ಭಾಗಗಳೆಂದು ಸ್ಪಷ್ಟವಾಗಿ ಘೋಷಿಸಿದೆ.
ಪ್ರಸ್ತುತ, ಭಾರತ ಸರ್ಕಾರವು ಇಸ್ರೇಲ್ ಸೇನೆ ಮಾಡಿದ ಎಡವಟ್ಟಿಗೆ ಸಂಬಂಧಿಸಿ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಘಟನೆಯು ಭಾರತ-ಇಸ್ರೇಲ್‌ನ ಗಟ್ಟಿ ರಾಜತಾಂತ್ರಿಕ ಮತ್ತು ರಕ್ಷಣಾ ಸಂಬಂಧಗಳ ಹಿನ್ನೆಲೆಯಲ್ಲಿ ಗಮನ ಸೆಳೆದಿದೆ. ಅಲ್ಲದೇ, ಇಸ್ರೇಲ್ ಭಾರತದ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರರಾಗಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಎರಡೂ ದೇಶಗಳು ಪರಸ್ಪರ ಸಹಕರಿಸುತ್ತಿವೆ.