ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆಗೆ ಕ್ಷಣಗಣನೆ ಶುರುವಾಗಿದೆ.
ಹಿರಿಯ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಯಾರಿಗೆಲ್ಲಾ ಅವಕಾಶ ಸಿಗಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಹೊಣೆಗಾರಿಕೆ ನಿಭಾಯಿಸುವ ಆಟಗಾರರು ಯಾರೆಲ್ಲಾ ಅನ್ನೋದು ಆಸಕ್ತಿ ಮೂಡಿಸಿದೆ. ಹಾಗೆ ನೋಡಿದರೆ, ಶುಭಮನ್ ಗಿಲ್ ಗೆ ತಂಡದ ಸಾರಥ್ಯ ಸಿಗುವುದು ಬಹುತೇಕ ಪಕ್ಕಾ ಆಗಿದೆ. ಉಳಿದಂತೆ, ಬುಮ್ರಾ ಮತ್ತು ಪಂತ್ ಪೈಕಿ ಒಬ್ಬರಿಗೆ ಉಪನಾಯಕನ ಪಟ್ಟಾಭಿಷೇಕವಾಗಲಿದೆ.
ಕನ್ನಡಿಗ ಕೆಎಲ್ ರಾಹುಲ್ ಸ್ಥಾನ ಭದ್ರವಾಗಿದ್ದು, ಯಶಸ್ವೀ ಜೈಸ್ವಾಲ್ ಜೊತೆ ಇನ್ನಿಂಗ್ಸ್ ಓಪನ್ ಮಾಡಲಿದ್ದಾರೆ. ಹೀಗಾಗಿ ಶುಭವನ್ ಗಿಲ್ ನಾಲ್ಕನೇ ಕ್ರಮಾಂಕಕ್ಕೆ ಜಾರುವ ಸಾಧ್ಯತೆ ಇದೆ. ಆದರೆ, ಮೂರನೇ ಕ್ರಮಾಂಕದ ಬ್ಯಾಟರ್ ಯಾರು ಎನ್ನುವುದು ದೊಡ್ಡ ಪ್ರಶ್ನೆ. ಈ ಸ್ಥಾನಕ್ಕಾಗಿ ಸಾಯಿ ಸುದರ್ಶನ್ ಮತ್ತು ಕರಣ್ ನಾಯರ್ ನಡುವೆ ತೀವ್ರ ಪೈಪೋಟಿ ಇದೆ. ಇಬ್ಬರಲ್ಲಿ ಒಬ್ಬರಿಗೆ ಸ್ಥಾನ ಬಹುತೇಕ ಪಕ್ಕಾ. ಇಬ್ಬರು ಬ್ಯಾಟರ್ ಗಳು ರಣಜಿ ಋತುವೇ ಆಗಿರಲಿ, ಐಪಿಎಲ್ ಆಗಿರಲಿ ಎರಡರಲ್ಲೂ ಅದ್ಭುತ ಆಟ ಪ್ರದರ್ಶಿಸಿದ್ದಾರೆ.
ಈ ಸಾಧನೆಯೇ ಇಬ್ಬರಲ್ಲಿ ಒಬ್ಬರನ್ನು ಇಂಗ್ಲೆಂಡ್ ವಿಮಾನ ಹತ್ತಿಸಲಿದೆ. ಈ ನಡುವೆ ವೇಗಿ ಮೊಹಮದ್ ಶಮಿ ಆಯ್ಕೆ ಇನ್ನೂ ಗೊಂದಲಮಯವಾಗಿದೆ. ಸನ್ ರೈಸರ್ಸ್ ಹೈದ್ರಾಬಾದ್ ಪರ ಐಪಿಎಲ್ ಆಡ್ತಿರೋ ಶಮಿ, ಫಿಟ್ನೆಸ್ ಬಗ್ಗೆ ಆಯ್ಕೆಗಾರರಲ್ಲಿ ಗೊಂದಲವಿದೆ. ಹೀಗಾಗಿಯೇ ಲಖನೌಗೆ ತೆರಳಿದ್ದ ಬಿಸಿಸಿಐ ಟ್ರೈನರ್, ಶಮಿ ಫಿಟ್ನೆಸ್ ಪರೀಕ್ಷಿಸಿ ಬಂದಿದ್ದಾರೆ. ಈ ವರದಿ ಆಧರಿಸಿ ಶಮಿ ಆಯ್ಕೆ ಭವಿಷ್ಯ ನಿರ್ಧಾರವಾಗಿಸಿದೆ.