ಟೀಂ ಇಂಡಿಯಾಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಮೊನ್ನೆಯಷ್ಟೇ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಇದೀಗ ಸ್ಫೋಟಕ ದಾಂಡಿಗ ವಿರಾಟ್ ಕೊಹ್ಲಿ ಕೂಡಾ ನಿವೃತ್ತಿ ಘೋಷಿಸಿದ್ದಾರೆ.
36 ವರ್ಷದ ಕೊಹ್ಲಿ ಇದೀಗ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 14 ವರ್ಷಗಳ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿಗೆ ಕೊಹ್ಲಿ ವಿದಾಯ ಹೇಳಿದ್ದಾರೆ. 2011ರಲ್ಲಿ ಕಿಂಗ್ಸ್ ಟನ್ ನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕೊಹ್ಲಿ ಟೆಸ್ಟ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೂ 9230 ರನ್ ಗಳನ್ನು ಕಲೆಹಾಕಿರುವ ಕಿಂಗ್ ಕೊಹ್ಲಿ, 123 ಪಂದ್ಯಗಳಿಂದ ಶೇ. 46.85ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.
ಇದರಲ್ಲಿ 30 ಶತಕ ಮತ್ತು 31 ಅರ್ಧಶತಕಗಳನ್ನು ಕೊಹ್ಲಿ ದಾಖಲಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಾಯಕತ್ವ ವಹಿಸಿದ್ದಾಗ ಆಡಿದ 68 ಪಂದ್ಯಗಳಲ್ಲಿ ಭಾರತವನ್ನು 40 ಪಂದ್ಯಗಳಲ್ಲಿ ಗೆಲುವಿನ ಗಡಿ ದಾಟಿಸಿದ್ದಾರೆ. ಕೊಹ್ಲಿ ಟೆಸ್ಟ್ ಜೀವನದಲ್ಲಿ 2016ರಿಂದ 2019ರ ಅವಧಿ ಅತ್ಯಂತ ಸುವರ್ಣ ಯುಗ ಅಂತಲೇ ಕರೆಸಿಕೊಳ್ತಿದೆ. ಈ ಅವಧಿಯಲ್ಲಿ ಕೊಹ್ಲಿ, 43 ಪಂದ್ಯಗಳಿಂದ 4208 ರನ್ ಗಳಿಸಿದ್ದಲ್ಲದೆ, 16 ಶತಕ 10 ಅರ್ಧ ಶತಕಗಳನ್ನು ಗಳಿಸಿದ್ರು. ಆದ್ರೆ 2020ರ ಅವಧಿ ನಿಜಕ್ಕೂ ಕೊಹ್ಲಿ ಅತ್ಯಂತ ಟೀಕೆಗಳನ್ನು ಎದುರಿಸಿದ ಕಾಲಾವಧಿ, ಈ ಸಮಯದಲ್ಲಿ ಕೊಹ್ಲಿ 39 ಟೆಸ್ಟ್ ಪಂದ್ಯಗಳನ್ನಾಡಿದ್ದು, ಕೇವಲ 2028 ರನ್ ಗಳನ್ನ ಮಾತ್ರ ಕಲೆಹಾಕಿದ್ದಾರೆ. ಹೀಗಾಗಿ ಕಳೆದ ನಾಲ್ಕೈದು ವರ್ಷಗಳಿಂದ ಕೊಹ್ಲಿ ಟೆಸ್ಟ್ ಗೆ ವಿದಾಯ ಹೇಳಲಿ ಅನ್ನೋ ಒತ್ತಡವೂ ಹೆಚ್ಚಾಗಿತ್ತು. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್-ಗವಾಸ್ಕರ್ ಸರಣಿಯೇ ಕೊಹ್ಲಿ ಆಡಿದ ಅಂತಿಮ ಟೆಸ್ಟ್ ಪಂದ್ಯವಾಗಿದೆ. ಈ ಮೂಲಕ ಭಾರತ ಕಂಡ ಅತ್ಯಂತ ಸರ್ವಶ್ರೇಷ್ಠ ಟೆಸ್ಟ್ ಆಟಗಾರನೊಬ್ಬನ ವೃತ್ತಿ ಬದುಕಿನ ಯುಗಾಂತ್ಯವಾದಂತಾಗಿದೆ.