ಬೆಂಗಳೂರು: ಅನಧಿಕೃತ ಫ್ಲೆಕ್ಸ್, ಬ್ಯಾನರ್ ಕಡಿವಾಣಕ್ಕೆ ಪಾಲಿಕೆ ಮುಂದಾಗಿದ್ದು, ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಹಲವೆಡೆ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಹಾಕಲಾಗುತ್ತಿದ್ದು, ಇದಕ್ಕೆಲ್ಲ ಪಾಲಿಕೆ ಕಡಿವಾಣ ಹಾಕಲು ಮುಂದಾಗಿದೆ. ಬಿಬಿಎಂಪಿಯಿಂದ ಅನಧಿಕೃತ ಜಾಹೀರಾತುಗಳಿಗೆ ಬ್ರೇಕ್ ಹಾಕಲು ಹೊಸ ಎಸ್ ಓಪಿ ಬಿಡುಗಡೆ ಮಾಡಲಾಗಿದೆ. ಇನ್ನು ಮುಂದೆ ಅನಧಿಕೃತ ಜಾಹೀರಾತು, ಫ್ಲೆಕ್ಸ್ ಅಳವಡಿಕೆ ಮಾಡಿದರೆ, ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗುತ್ತದೆ. ಕಟ್ಟಡಗಳ ಮೇಲೆ ಪೋಸ್ಟ್ ಅಂಟಿಸುವುದು, ಫ್ಲೆಕ್ಸ್, ಬ್ಯಾನರ್, ಕಟೌಟ್ ಹಾಕುವವರಿಗೆ ಇನ್ನು ಮುಂದೆ ಎಫ್ ಐಆರ್ ಕಾದಿದೆ.
ಹೊಯ್ಸಳ ವಾಹನದಲ್ಲಿ ರಾತ್ರಿ ವೇಳೆ ಪೊಲೀಸರ ಜೊತೆ ಬಿಬಿಎಂಪಿ ಅಧಿಕಾರಿಗಳು ಗಸ್ತು ತಿರುಗುತ್ತಾರೆ. ಈ ವೇಳೆ ಅನಧಿಕೃತವಾಗಿ ಬ್ಯಾನರ್, ಫ್ಲೆಕ್ಸ್, ಕಟೌಟ್ ಹಾಕುವುದು ಕಂಡು ಬಂದರೆ ಎಫ್ ಐಆರ್ ದಾಖಲು ಮಾಡಲಾಗುತ್ತದೆ.
ಕಟೌಟ್, ಬ್ಯಾನರ್, ಫ್ಲೆಕ್ಸ್ ಗಳಲ್ಲಿ ಅಳವಡಿಕೆ ಮಾಡಿರುವ ಫೋಟೋದಲ್ಲಿರುವವರ ಮೇಲೆ ಕೂಡ ಎಫ್ ಐಆರ್ ದಾಖಲಿಸಲಾಗುತ್ತದೆ. ತೆರವು ಮಾಡುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ತೊಂದರೆ ಕೊಟ್ಟರೂ ಅರೆಸ್ಟ್ ಮಾಡುವ ಅವಕಾಶವಿದೆ. ಗಲಾಟೆ ಮಾಡಿದವರ ಮೇಲೆ ಎಫ್ ಐಅರ್ ದಾಖಲೆ ಮಾಡಬಹುದು. ಪೊಲೀಸ್ ಇಲಾಖೆ ಇದಕ್ಕೆ ಸರಿಯಾದ ರೀತಿಯಲ್ಲಿ ಸಹಕಾರ ನೀಡಬೇಕು.