ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಬೆಳ್ಳುಳ್ಳಿಯನ್ನು ಬಳಸೇ ಬಳಸುತ್ತಾರೆ. ಕೆಲವರಿಗೆ ಬೆಳ್ಳುಳ್ಳಿ ಇಷ್ಟವಾದರೆ ಇನ್ನೂ ಕೆಲವರು ಬೆಳ್ಳುಳ್ಳಿನಾ ಅಂತ ಮೂತಿ ತಿರುಗಿಸುತ್ತಾರೆ. ಹಲವರ ಊಟದಲ್ಲ ಅದು ನಿಷೇಧ.
ಬೆಳ್ಳುಳ್ಳಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳು ಅಡಕವಾಗಿದ್ದು, ದೇಹಕ್ಕೆ ಶಕ್ತಿ ನೀಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಆದರೆ ಇವುಗಳನ್ನು ಬೇಸಿಗೆಯಲ್ಲಿ ಸೇವನೆ ಮಾಡಬಹುದೇ? ಎಂಬ ಗೊಂದಲ ಹಲವರನ್ನು ಕಾಡುತ್ತದೆ. ಈ ಬಗ್ಗೆ ಆಯುರ್ವೇದ ತಜ್ಞರು ಹೇಳುವ ಪ್ರಕಾರ ಬೇಸಿಗೆ ಸಮಯದಲ್ಲಿ ಇವುಗಳ ಅತಿಯಾದ ಸೇವನೆ ಒಳ್ಳೆಯದಲ್ಲ.
ಏಕೆಂದರೆ ಬೆಳ್ಳುಳ್ಳಿ ನೈಸರ್ಗಿಕವಾಗಿ ದೇಹವನ್ನು ಬೆಚ್ಚಗಾಗಿಸುವ ಸ್ವಭಾವವನ್ನು ಹೊಂದಿರುತ್ತದೆ. ಇದರರ್ಥ ಇದು ದೇಹದಲ್ಲಿ ಶಾಖವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದ್ದು, ಬೇಸಿಗೆಯಲ್ಲಿ ಹವಾಮಾನವು ಈಗಾಗಲೇ ಬಿಸಿಯಾಗಿರುವುದರಿಂದ ಇವುಗಳ ಅತಿಯಾದ ಸೇವನೆ ಒಳ್ಳೆಯದಲ್ಲ. ಇದು ನಮ್ಮ ದೇಹದ ಶಾಖವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಹಾಗಾದರೆ ಬೆಳ್ಳುಳ್ಳಿಯನ್ನು ಬೇಸಿಗೆ ಸಮಯದಲ್ಲಿ ಯಾರು ಸೇವನೆ ಮಾಡಬಾರದು? ಎಂದರೆ, ಬಾಯಿಯೊಳಗೆ ಹುಣ್ಣು, ಅಜೀರ್ಣ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳಿರುವವರು ಬೇಸಿಗೆಯಲ್ಲಿ ಹಸಿ ಬೆಳ್ಳುಳ್ಳಿಯನ್ನು ಸೇವನೆ ಮಾಡಬಾರದು. ಏಕೆಂದರೆ ಇದು ಆರೋಗ್ಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ನಿಮಗೆ ತಿನ್ನಲೇಬೇಕಾದರೆ ವೈದ್ಯರ ಸಲಹೆ ತೆಗೆದುಕೊಂಡ ಆ ನಂತರವೇ ಸೇವನೆ ಮಾಡುವುದು ಬಹಳ ಸೂಕ್ತ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.