ಬೆಂಗಳೂರು: ಪ್ರಮುಖ ಬೆಳವಣಿಗೆಯೊಂದರಲ್ಲಿ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿಯು ಷೇರು ಮಾರುಕಟ್ಟೆಯಿಂದ ಜೆನ್ಸೋಲ್ ಎಂಜಿನಿಯರಿಂಗ್ ಲಿಮಿಟೆಡ್ (Gensol Engineering Limited) ಕಂಪನಿಯನ್ನು ನಿಷೇಧಿಸಿದೆ. ಷೇರು ಮಾರುಕಟ್ಟೆಯಿಂದ ಕಂಪನಿ ಹಾಗೂ ಅದರ ಪ್ರವರ್ತಕರಾದ ಅನ್ಮೋಲ್ ಸಿಂಗ್ ಜಗ್ಗಿ ಹಾಗೂ ಪುನೀತ್ ಸಿಂಗ್ ಜಗ್ಗಿ ಅವರನ್ನು ನಿಷೇಧಿಸಿದೆ. ಹಾಗಾಗಿ, ಹೂಡಿಕೆದಾರರು ಈ ಕಂಪನಿಯಲ್ಲಿ ಹೂಡಿಕೆ ಮಾಡಬಾರದು ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.
ಜೆನ್ಸೋಲ್ ಎಂಜಿನಿಯರಿಂಗ್ ಲಿಮಿಟೆಡ್ ಕಂಪನಿಯು 1:10 ಅನುಪಾತದಲ್ಲಿ ಷೇರುಗಳ ವಿಭಜನೆಗೂ ಮುಂದಾಗಿತ್ತು. ಆದರೆ, ಇದಕ್ಕೂ ಕೂಡ ಸೆಬಿಯು ನಿರ್ಬಂಧ ಹೇರಿದೆ. ಸೆಬಿಯ ನಿರ್ಧಾರದಿಂದಾಗಿ ಕಂಪನಿಯ ಷೇರುಗಳ ಮೌಲ್ಯ ಕುಸಿಯುವ ಸಾಧ್ಯತೆ ಇದೆ. ಹೂಡಿಕೆಗೂ ಇದು ಸಕಾಲವಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ, ಹೂಡಿಕೆದಾರರು ಎಚ್ಚರದಿಂದ ಇರಬೇಕು ಎಂದು ತಜ್ಞರು ಸೂಚಿಸಿದ್ದಾರೆ.
ಕಂಪನಿಯ ಫಂಡ್ ಗಳನ್ನು ಡೈವರ್ಟ್ ಮಾಡಿರುವುದು ಮತ್ತು ಕಾರ್ಪೊರೇಟ್ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸೆಬಿ ಈ ನಿರ್ಬಂಧ ಹೇರಿದೆ. ಐದು ವರ್ಷಗಳ ಕಾಲ ಷೇರು ಮಾರುಕಟ್ಟೆಯಲ್ಲಿ ಕಂಪನಿ ಹಾಗೂ ಇದರ ಪ್ರಮೋಟರ್ ಗಳು ಭಾಗವಹಿಸುವುದನ್ನು ಸೆಬಿ ನಿರ್ಬಂಧಿಸಿದೆ.
ಜೆನ್ಸೋಲ್ ಕಂಪನಿಯಲ್ಲಿ ಅನ್ಮೋಲ್ ಸಿಂಗ್ ಮತ್ತು ಪುನೀತ್ ಸಿಂಗ್ ಜಗ್ಗಿ ಅವರು ನಿರ್ದೇಶಕ ಸ್ಥಾನ ಸೇರಿದಂತೆ ಪ್ರಮುಖ ಹುದ್ದೆಗಳನ್ನು ಹೊಂದಿರಬಾರದು ಎಂದು ಕೂಡ ಸೆಬಿ ಆದೇಶ ಹೊರಡಿಸಿದೆ. ಇದರ ಜತೆಗೆ, ಜೆನ್ಸೋಲ್ ಎಂಜಿನಿಯರಿಂಗ್ ಕಂಪನಿಯು ಘೋಷಿಸಿದ್ದ ಷೇರು ವಿಭಜನೆಯನ್ನು ಕೂಡ ಸ್ಥಗಿತಗೊಳಿಸಿದೆ.
2024ರ ಜೂನ್ ನಲ್ಲಿ ಸ್ವೀಕರಿಸಿದ ದೂರಿನ ತನಿಖೆಯಲ್ಲಿ ಕಂಪನಿಯು ತನ್ನ ಫಂಡ್ ಅನ್ನು ಬೇರೆಡೆಗೆ ತಿರುಗಿಸಿರುವುದು, ಸುಳ್ಳು ದಾಖಲೆಗಳನ್ನು ಸಲ್ಲಿಸಿರುವುದು ಮತ್ತು ಕಾರ್ಪೊರೇಟ್ ಅಕ್ರಮಗಳನ್ನು ಮಾಡಿರುವುದು ಬೆಳಕಿಗೆ ಬಂದಿದೆ. ಇದೇ ಕಾರಣಕ್ಕೆ ಸೆಬಿ ಕ್ರಮ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.