ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆಯಲ್ಲಿ 9,900 ಅಸಿಸ್ಟಂಟ್ ಲೋಕೊ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಎಸ್ ಎಸ್ ಎಲ್ ಸಿ, ಐಟಿಐ, ಡಿಪ್ಲೋಮಾ ಕೋರ್ಸ್ ಮುಗಿಸಿದವರು ಆನ್ ಲೈನ್ ಮೂಲಕ ಅರ್ಜಿ (RRB Recruitment 2025) ಸಲ್ಲಿಸಬಹುದಾಗಿದೆ. ರೈಲ್ವೆ ಇಲಾಖೆಯು ಈಗ ಶಾರ್ಟ್ ನೋಟಿಫಿಕೇಶನ್ ಮಾತ್ರವೇ ಬಿಡುಗಡೆ ಮಾಡಿದೆ. ವಿಸ್ತೃತ ಅಧಿಸೂಚನೆಯನ್ನು ಏಪ್ರಿಲ್ 9 ರಂದು ಬಿಡುಗಡೆ ಮಾಡಿದೆ.
ಏಪ್ರಿಲ್ 10ರಿಂದ ರೈಲ್ವೆ ಇಲಾಖೆಯು ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಿದೆ. ಮೇ 5ರ ಮಧ್ಯರಾತ್ರಿಯವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಪಡೆಯಲು, ಅರ್ಜಿ ಸಲ್ಲಿಸಲು https://www.rrbcdg.gov.in/ ವೆಬ್ ಪೋರ್ಟಲ್ ಗೆ ಭೇಟಿ ನೀಡಬಹುದಾಗಿದೆ.
ನೇಮಕಾತಿ ಹೊಂದಿದ ಬಳಿಕ 7ನೇ ವೇತನ ಆಯೋಗದ ಲೆವೆಲ್ 2 ಹಂತದ ಪ್ರಕಾರ ಮಾಸಿಕ 19,900 ರೂಪಾಯಿಯಿಂದ 63,200 ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಅನುಭವದ ಅವಶ್ಯಕತೆ ಇಲ್ಲ. ಅನುಭವ ಇಲ್ಲದವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹತೆಗಳು ಏನು?
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಎಸ್ ಸಿ, ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇದೆ. ಜನರಲ್ ಕೆಟಗರಿ ಹಾಗೂ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಅಭ್ಯರ್ಥಿಗಳಿಗೆ 500 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 250 ಅರ್ಜಿ ಶುಲ್ಕ ಇದೆ.