ಬೆಂಗಳೂರು: ಪೊಲೀಸರ (Police) ಮಕ್ಕಳಿಗಾಗಿ ಮತ್ತಷ್ಟು ಶಾಲೆಗಳನ್ನು ತೆರೆಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪೊಲೀಸ್ ಸಂಸ್ಮರಣಾ ದಿನದಂದು ಹುತಾತ್ಮ ಪೊಲೀಸ್ ಸಿಬ್ಬಂದಿಗೆ ನಮನ ಸಲ್ಲಿಸಿ ಮಾತನಾಡಿದ ಅವರು, ಪೊಲೀಸರ ಕಾರ್ಯಕ್ಕೆ ನಮ್ಮ ಸಹಕಾರ ಇದ್ದೇ ಇರುತ್ತದೆ. ಪೊಲೀಸ್ ಸಿಬ್ಬಂದಿಯ ಹಿತ ರಕ್ಷಿಸಲು ಸರ್ಕಾರ ಬದ್ದವಾಗಿ ನಿಂತಿದೆ. 2025ರಲ್ಲಿ 10 ಸಾವಿರ ಪೊಲೀಸ್ ವಸತಿ ಮನೆಗಳ ನಿರ್ಮಾಣಕ್ಕೆ 2000 ಕೋಟಿ ರೂ. ನೀಡಲಾಗಿದೆ. 200 ಕೋಟಿ ವೆಚ್ಚದಲ್ಲಿ 100 ಹೊಸ ಠಾಣೆಗಳ ನಿರ್ಮಾಣವಾಗುತ್ತಿವೆ. ಪೊಲೀಸ್ ಮಕ್ಕಳಿಗಾಗಿ 7 ಪ್ರಮುಖ ಸ್ಥಳಗಳಲ್ಲಿ 7 ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು ಎಂದು ಹೇಳಿದ್ದಾರೆ.
ದೇಶದಲ್ಲಿ ಆಂತರಿಕ ಭದ್ರತೆ ಕಾಪಾಡುವಲ್ಲಿ, ದೌರ್ಜನ್ಯ, ಅಪರಾಧ, ದುರಂತಗಳನ್ನು ತಡೆಯುವುದರಲ್ಲಿ ಪೊಲೀಸ್ ಸಿಬ್ಬಂದಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಕಾಳಜಿಯಿಂದಾಗಿ ಸಮಾಜದಲ್ಲಿ ಶಾಂತಿ ನೆಲೆಸಿದಂತಾಗಿದೆ. ಶೋಷಿತರ ಸಂವಿಧಾನಬದ್ದವಾದ ಹಕ್ಕುಗಳನ್ನು ಕಾಪಾಡಲು ಮುಖ್ಯ ಪಾತ್ರ ವಹಿಸುವವರು ನಮ್ಮ ಪೊಲೀಸರು. ಹೀಗಾಗಿ ಸರ್ಕಾರ ಅವರೊಂದಿಗೆ ಸದಾ ಇರುತ್ತದೆ ಎಂದಿದ್ದಾರೆ.
ಗೃಹ ಸಚಿವ ಜಿ.ಪರಮೇಶ್ವರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯಕಾರ್ಯದರ್ಶಿ ಅತೀಕ್ ಎಲ್.ಕೆ., ಗೃಹ ಕಾರ್ಯದರ್ಶಿ ಉಮಾಶಂಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೇರಿದಂತೆ ಹಲವರು ಇದ್ದರು.