ಮಂಡ್ಯ: ವೈದ್ಯರ ನಿರ್ಲಕ್ಷ್ಯಕ್ಕೆ ಅಪ್ರಾಪ್ತ ಬಾಲಕಿ ಸಾವನ್ನಪ್ಪಿರುವ ಆರೋಪವೊಂದು ಕೇಳಿ ಬಂದಿದೆ.
ಮಿಮ್ಸ್ ವೈದ್ಯರ (MIMS Hospital Doctors) ನಿರ್ಲಕ್ಷ್ಯಕ್ಕೆ ಮಗು ಬಲಿಯಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಳವಳ್ಳಿಯ ನೆಲ್ಲೂರು ಗ್ರಾಮದ ಸಾನ್ವಿ (7) ಸಾವನ್ನಪ್ಪಿರುವ ಬಾಲಕಿ. ಬಾಲಕಿಯು ಪಾದದ ಮೂಳೆ ಮುರಿತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಟೈಲ್ಸ್ ಬಿದ್ದು ಬಾಲಕಿಯ ಪಾದದ ಮೂಳೆ ಮುರಿದಿತ್ತು. ಹೀಗಾಗಿ ತಂದೆ ನಿಂಗರಾಜು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಚಿಕಿತ್ಸೆ ಮುಂದುವರೆಸಿ ಗುರುವಾರ ರಾತ್ರಿ ಶಸ್ತ್ರಚಿಕಿತ್ಸೆ ನಡೆಸಿದ್ದರು. ನಂತರ ಅಂದೇ ರಾತ್ರಿ ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ.
ಶುಕ್ರವಾರ ಬೆಳಗ್ಗೆ ಬಾಲಕಿ ಆರೋಗ್ಯದಲ್ಲಿ ಏರುಪೇರಾಗಿದೆ. ಆನಂತರ ಐಸಿಯುನಲ್ಲಿ ಇಡಲಾಗಿತ್ತು. ಶನಿವಾರ ಬೆಳಗ್ಗೆ ಔಷಧಿ ನೀಡುತ್ತಿದ್ದಂತೆ ಪ್ರಜ್ಞಾಹೀನ ಬಾಲಕಿ ತಲುಪಿದ್ದಾಳೆ. ವೈದ್ಯರು ಸಾವನ್ನಪ್ಪಿರುವ ಕುರಿತು ಮಾಹಿತಿ ನೀಡಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.