ಕಳೆದ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ರಾಜಸ್ಥಾನ್ ರಾಯಲ್ಸ್ ಈ ಬಾರಿ ಪ್ಲೇ ಆಫ್ ರೇಸ್ ನಿಂದ ಹೊರ ಬಿದ್ದಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ರಾಜಸ್ಥಾನ್ ತಂಡ ಇಂದು ನಡೆದ ಪಂದ್ಯದಲ್ಲಿ ಗೆಲ್ಲಬಹುದು ಎಂಬ ಭರವಸೆ ಮೂಡಿದ್ದರೂ ಕೊನೆಯಲ್ಲಿ ಎಡವಿದೆ.
ನಾಯಕ ಸಂಜು ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದ ರಿಯಾನ್ ಪರಾಗ್ ಆರಂಭಿಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ಎಡವಿದ್ದರು. ಆದರೆ, ಇಂದು ನಡೆದ ಕೆಕೆಆರ್ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದರೂ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು. ಆದರೂ ಈ ಪಂದ್ಯದಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ.
13 ನೇ ಓವರ್ ನ್ನು ಮೊಯೀನ್ ಅಲಿ ಎಸೆಯಲು ಆರಂಭಿಸಿದ್ದರು. ಓವರ್ನ ಮೊದಲ ಎಸೆತದಲ್ಲಿ ಶಿಮ್ರಾನ್ ಹೆಟ್ಮೆಯರ್ ಒಂದು ರನ್ ಗಳಿಸಿದರೆ, ಪರಾಗ್ ಉಳಿದ 5 ಎಸೆತಗಳಲ್ಲಿ ಸತತ 5 ಸಿಕ್ಸರ್ಗಳನ್ನು ಬಾರಿಸಿದರು. ಈ ಮೂಲಕ ಅರ್ಧಶತಕ ಪೂರ್ಣಗೊಳಿಸಿದರು. ನಂತರದ 14ನೇ ಓವರ್ನ ಎರಡನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಈ ರೀತಿ ಪರಾಗ್ ಸತತ 6 ಎಸೆತಗಳಲ್ಲಿ 6 ಸಿಕ್ಸರ್ಗಳನ್ನು ಗಳಿಸಿದರು. ಈ ಪಂದ್ಯದಲ್ಲಿ ರಿಯಾನ್ 45 ಎಸೆತಗಳಲ್ಲಿ 6 ಬೌಂಡರಿ ಮತ್ತು 8 ಸಿಕ್ಸರ್ಗಳಿಂದ 95 ರನ್ ಗಳಿಸಿ ಔಟ್ ಆದರು. ಆದರೆ, ತಂಡ ಮಾತ್ರ 1 ರನ್ ಗಳಿಂದ ಸೋಲು ಕಂಡಿತು.