ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರ್ ಬಾಂಬ್ ಸ್ಫೋಟದ ತನಿಖೆ ಮುಂದುವರಿದಂತೆ, ಉಗ್ರರ ಮತ್ತೊಂದು ಭಯಾನಕ ಸಂಚು ಬೆಳಕಿಗೆ ಬಂದಿದೆ. ಬಾಬರಿ ಮಸೀದಿ ಧ್ವಂಸದ ವಾರ್ಷಿಕ ದಿನವಾದ ಡಿಸೆಂಬರ್ 6 ರಂದು ದೆಹಲಿಯ ಆರು ಪ್ರಮುಖ ಸ್ಥಳಗಳು ಸೇರಿ ಹಲವೆಡೆ ಸರಣಿ ದಾಳಿ ನಡೆಸಲು ಬರೋಬ್ಬರಿ 32 ಕಾರುಗಳನ್ನು ಸಿದ್ಧಪಡಿಸಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿಯನ್ನು ತನಿಖಾ ಮೂಲಗಳು ಬಹಿರಂಗಪಡಿಸಿವೆ.
ದಾಳಿಗಾಗಿ ಸಿದ್ಧವಾಗಿದ್ದ ಕಾರುಗಳು ಪತ್ತೆ
ಸ್ಫೋಟಗೊಂಡ ಹ್ಯುಂಡೈ ಐ20 (Hyundai i20) ಸೇರಿದಂತೆ ನಾಲ್ಕು ಕಾರುಗಳು ಈ ದಾಳಿಯ ಭಾಗವಾಗಿದ್ದವು. ಇದೀಗ ತನಿಖಾ ಸಂಸ್ಥೆಗಳು ಮಾರುತಿ ಸುಜುಕಿ ಬ್ರೆಝಾ (Maruti Suzuki Brezza), ಮಾರುತಿ ಸ್ವಿಫ್ಟ್ ಡಿಜೈರ್ (Maruti Swift Dzire) ಮತ್ತು ಫೋರ್ಡ್ ಇಕೋಸ್ಪೋರ್ಟ್ (Ford EcoSport) ಕಾರುಗಳನ್ನು ಪತ್ತೆಹಚ್ಚಿವೆ. ಹಳೆಯ ಮತ್ತು ಹಲವು ಬಾರಿ ಮಾರಾಟವಾದ ಕಾರುಗಳನ್ನು ಬಳಸಿ, ಪೊಲೀಸರ ದಾರಿ ತಪ್ಪಿಸುವುದು ಉಗ್ರರ ತಂತ್ರವಾಗಿತ್ತು. ಸ್ಫೋಟಕಗಳನ್ನು ಸಾಗಿಸಲು ಬಳಸಲಾಗಿದ್ದ ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ (Ford EcoSport) ಕಾರು ಹರ್ಯಾಣದ ಫರಿದಾಬಾದ್‌ನಲ್ಲಿ ಪತ್ತೆಯಾಗಿದ್ದು, ಕಾರಿನಲ್ಲಿದ್ದ ಯುವಕನನ್ನು ವಶಕ್ಕೆ ಪಡೆಯಲಾಗಿದೆ.
ಭಯೋತ್ಪಾದಕರ ಹೊಸ ಕಾರ್ಯತಂತ್ರ
ಈ ಭಯೋತ್ಪಾದಕ ಜಾಲದ ಕೇಂದ್ರಬಿಂದು ಹರ್ಯಾಣದ ಫರಿದಾಬಾದ್‌ನಲ್ಲಿರುವ ಅಲ್-ಫಲಾಹ್ ಸ್ಕೂಲ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ ಆಗಿದೆ. ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಈ ಕೃತ್ಯದ ಹಿಂದಿದೆ. ವೈದ್ಯರಂತಹ ವೈಟ್-ಕಾಲರ್ ವೃತ್ತಿಪರರ ಸೋಗಿನಲ್ಲಿ ಸ್ಥಳೀಯರ ವಿಶ್ವಾಸ ಗಳಿಸಿ, ಯಾವುದೇ ಅನುಮಾನ ಬಾರದಂತೆ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವುದು ಇವರ ಹೊಸ ಕಾರ್ಯತಂತ್ರವಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಕೆಂಪುಕೋಟೆ ಬಳಿ ನಡೆದ ಸ್ಫೋಟದಲ್ಲಿ 13 ಮಂದಿ ಮೃತಪಟ್ಟಿದ್ದರು. ಉಗ್ರ ಡಾ.ಉಮರ್ ಮೊಹಮ್ಮದ್ ಎಂಬಾತನೇ ಈ ಸ್ಫೋಟಕ್ಕೆ ಕಾರಣಕರ್ತ ಎಂದು ತಿಳಿದುಬಂದಿದ್ದು, ಆತ ಸ್ಫೋಟದಲ್ಲಿ ಮೃತಪಟ್ಟಿರುವುದನ್ನು ಡಿಎನ್‌ಎ ಪರೀಕ್ಷೆ ದೃಢಪಡಿಸಿದೆ. ಸಹಚರರಾದ ಆದಿಲ್ ಅಹ್ಮದ್ ರಾಥರ್, ಮುಜಮ್ಮಿಲ್ ಶಕೀಲ್ ಮತ್ತು ಶಹೀನಾ ಸಯೀದ್ ಬಂಧನಕ್ಕೊಳಗಾಗುತ್ತಿದ್ದಂತೆ ಉಮರ್ ಮೊಹಮ್ಮದ್ ಆತಂಕಗೊಂಡು ಸಮಯಕ್ಕಿಂತ ಮುಂಚಿತವಾಗಿಯೇ ಸ್ಫೋಟಿಸಿರಬಹುದು ಎಂದು ಶಂಕಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ನೌಗಾಮ್‌ನಲ್ಲಿ ಜೈಶ್ ಉಗ್ರ ಸಂಘಟನೆಯನ್ನು ಹೊಗಳುವ ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದ ಆದಿಲ್ ಅಹ್ಮದ್ ರಾಥರ್ ಸಿಸಿಟಿವಿ ದೃಶ್ಯಾವಳಿಯಲ್ಲಿ ಸಿಕ್ಕಿಬಿದ್ದಿದ್ದೇ ಈ ಇಡೀ ಜಾಲ ಬಯಲಾಗಲು ಕಾರಣವಾಯಿತು. ಸದ್ಯ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕರಣದ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಉಗ್ರರ ಸಭೆ ನಡೆಯುತ್ತಿದ್ದ ಫರೀದಾಬಾದ್ ವಿವಿ ಕಟ್ಟಡ 17, ರೂಮ್ ನಂಬರ್ 13ರ ಕರಾಳ ಸತ್ಯ



















