ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ (SAIL Recruitment 2025) ಖಾಲಿ ಇರುವ 302 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಮೇ 30 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಹಾಗಾಗಿ, ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಬೇಕಾಗಿದೆ.
ಭಾರತೀಯ ಉಕ್ಕು ಪ್ರಾಧಿಕಾರವು ಉಕ್ಕು ಉತ್ಪಾದನೆಯಲ್ಲಿ ದೇಶದಲ್ಲೇ ಅಗ್ರ ಸ್ಥಾನ ಪಡೆದಿದೆ. ಎಲೆಕ್ಟ್ರಿಶಿಯನ್, ಫಿಟ್ಟರ್, ಮೆಷಿನಿಸ್ಟ್, ವೆಲ್ಡರ್, ಪ್ಲಂಬರ್ ಸೇರಿ ಹಲವು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಎಲೆಕ್ಟ್ರಿಶಿಯನ್ 30, ಫಿಟ್ಟರ್ 52, ರಿಗ್ಗರ್ 25, ಟರ್ನರ್ 19, ಮೆಷಿನಿಸ್ಟ್ 20, ವೆಲ್ಡರ್ 50, ಪ್ಲಂಬರ್ 8 ಸೇರಿ ಒಟ್ಟು 302 ಹುದ್ದೆಗಳು ಖಾಲಿ ಇವೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಐಟಿಐ ಪೂರ್ಣಗೊಳಿಸಿರಬೇಕು. 18 ವರ್ಷ ದಾಟಿದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಧಿಕೃತ ವೆಬ್ ಸೈಟ್ ಆಗಿರುವ sail.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇವೆಲ್ಲ ಅಪ್ರೆಂಟಿಸ್ ಹುದ್ದೆಗಳಾಗಿರುವುದರಿಂದ ಮಾಸಿಕ 7 ಸಾವಿರ ರೂಪಾಯಿಯಿಂದ 7,700 ರೂಪಾಯಿ ಸ್ಟೈಪೆಂಡ್ ದೊರೆಯಲಿದೆ. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಮಾನದಂಡಗಳ ಪ್ರಕಾರ ವಯಸ್ಸಿನ ಸಡಿಲಿಕೆ ಇದೆ. ಅರ್ಜಿ ಸಲ್ಲಿಸಿದ ಬಳಿಕ, ಅವುಗಳನ್ನು ಮೆರಿಟ್ ಪಟ್ಟಿಯಲ್ಲಿ ಬಿಡುಗಡೆ ಮಾಡುವ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.