ನವದೆಹಲಿ: 2023ರಲ್ಲಿ ಭಾರತದಲ್ಲಿ ಶೇಕಡಾ 30.8ರಷ್ಟು ಬಾಲಕಿಯರು ಮತ್ತು ಶೇ.13ರಷ್ಟು ಬಾಲಕರು 18 ವರ್ಷಕ್ಕಿಂತ ಮುಂಚೆಯೇ ಲೈಂಗಿಕ ದೌರ್ಜನ್ಯ(Sexual violence)ಕ್ಕೊಳಗಾಗಿದ್ದಾರೆ ಎಂಬ ಆಘಾತಕಾರಿ ವಿಚಾರವನ್ನು ದಿ ಲ್ಯಾನ್ಸೆಟ್ ಜರ್ನಲ್ ವರದಿ ಮಾಡಿದೆ.
1990ರಿಂದ 2023ರವರೆಗೆ 200ಕ್ಕೂ ಹೆಚ್ಚು ದೇಶಗಳಲ್ಲಿ ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯದ ವ್ಯಾಪಕತೆ ಬಗ್ಗೆ ನಡೆದ ಅಧ್ಯಯನ ವರದಿಯು ಈ ವಿಚಾರವನ್ನು ಬಯಲು ಮಾಡಿದೆ. ಅಲ್ಲದೆ ದಕ್ಷಿಣ ಏಷ್ಯಾದಲ್ಲಿ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಮಾಣವು ಅತಿ ಹೆಚ್ಚಾಗಿದೆ ಎಂದು ಈ ಅಧ್ಯಯನ ಕಂಡುಕೊಂಡಿದೆ. ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಬಾಂಗ್ಲಾದೇಶದಲ್ಲಿ 9.3%ದಷ್ಟಿದ್ದರೆ, ಭಾರತದಲ್ಲಿ 30.8% ರಷ್ಟಿದೆ ಎಂದಿದೆ.

ವಿಶ್ವಾದ್ಯಂತ, ಸುಮಾರು ಐದರಲ್ಲಿ ಒಬ್ಬ ಬಾಲಕಿ ಮತ್ತು ಏಳರಲ್ಲಿ ಒಬ್ಬ ಬಾಲಕ 18 ವರ್ಷಕ್ಕಿಂತ ಮುಂಚೆ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾರೆ ಎಂದು ಅಂದಾಜಿಸಲಾಗಿದೆ.
ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಎವ್ಯಾಲ್ಯೂಷನ್ನ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ಆಫ್ರಿಕಾದ ಸಹಾರಾ ವ್ಯಾಪ್ತಿಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಮಾಣವು ಅತಿ ಹೆಚ್ಚಾಗಿದೆ. ಜಿಂಬಾಬ್ವೆಯಲ್ಲಿ ಇದರ ಪ್ರಮಾಣ ಸುಮಾರು ಶೇ.8ರಷ್ಟಿದ್ದರೆ ಕೋಟ್ ಡಿ’ಐವೊರ್ನಲ್ಲಿ ಶೇ.28ರಷ್ಟಿದೆ.
ಲೈಂಗಿಕ ದೌರ್ಜನ್ಯದ ಪರಿಣಾಮಗಳು
ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯವು ಗಂಭೀರವಾದ ಸಾರ್ವಜನಿಕ ಆರೋಗ್ಯ ಮತ್ತು ಮಾನವ ಹಕ್ಕುಗಳ ಸಮಸ್ಯೆಯಾಗಿದೆ. ಲೈಂಗಿಕ ದೌರ್ಜನ್ಯದಂತಹ ಘಟನೆಗಳು ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಿ, ಮಾನಸಿಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ.
ಸಂಶೋಧನೆಯ ಮಹತ್ವ
ಲೈಂಗಿಕ ದೌರ್ಜನ್ಯದ ನಿಖರವಾದ ಜಾಗತಿಕ ಅಂದಾಜುಗಳು ಸಿಕ್ಕರೆ ಅವುಗಳನ್ನು ತಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಆದರೆ, ಅಸ್ತಿತ್ವದಲ್ಲಿರುವ ಅಧ್ಯಯನಗಳು ಸೀಮಿತ ದೇಶಗಳಿಗೆ ಮಾತ್ರ ಅಂದಾಜುಗಳನ್ನು ಒದಗಿಸುತ್ತವೆ ಮತ್ತು ದತ್ತಾಂಶಗಳ ಕೊರತೆಯೂ ಒಂದು ರೀತಿ ಸವಾಲಾಗಿದೆ.
ವರದಿಯ ಪ್ರಮುಖ ಅಂಶಗಳು
- 2023ರಲ್ಲಿ ಜಾಗತಿಕವಾಗಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಪ್ರಮಾಣ ಶೇ.18.9% ಮತ್ತು ಗಂಡು ಮಕ್ಕಳ ಮೇಲೆ ಶೇ.14.8 ಎಂದು ಅಂದಾಜಿಸಲಾಗಿದೆ.
- ವಿಶ್ವದ ಸುಮಾರು ಶೇಕಡಾ 70ರಷ್ಟು ಪುರುಷರು ಮತ್ತು ಮಹಿಳೆಯರು 18 ವರ್ಷಕ್ಕಿಂತ ಮುಂಚೆಯೇ ಮೊದಲ ಲೈಂಗಿಕ ದೌರ್ಜನ್ಯವನ್ನು ಎದುರಿಸಿರುತ್ತಾರೆ.
ಸಂಶೋಧಕರ ಸಲಹೆಗಳೇನು?
ಸಂಶೋಧಕರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ “ನಿರಂತರ ದತ್ತಾಂಶ ಕೊರತೆ” ಇರುವುದನ್ನು ಗುರುತಿಸಿದ್ದಾರೆ. ಇದಕ್ಕಾಗಿ ವಿಸ್ತೃತ ಸಮೀಕ್ಷೆಗಳು ಮತ್ತು ಕಣ್ಗಾವಲು ಕಾರ್ಯಕ್ರಮಗಳ ಅಗತ್ಯವನ್ನು ಒತ್ತಿಹೇಳಿದ್ದಾರೆ. ಜೊತೆಗೆ ಮಕ್ಕಳಿಗೆ ಲೈಂಗಿಕ ದೌರ್ಜನ್ಯ-ಮುಕ್ತ ಬಾಲ್ಯವನ್ನು ಸೃಷ್ಟಿಸಬೇಕೆಂದೂ ಸಲಹೆ ನೀಡಿದ್ದಾರೆ.